ಲಿಂಗಪ್ಪ, ಬಸವರಾಜು ಅವರು ಕನ್ನಡ ವಿದ್ವಾಂಸರಲ್ಲಿ ಮೊದಲ ಸಾಲಿಗೆ
ಸೇರಿದವರು.ಅವರು ವಿಶೇಷ ಪರಿಣತಿ ಪಡೆದಿರುವ ಕ್ಷೇತ್ರಗಳಲ್ಲಿ ಗ್ರಂಥಸಂಪಾದನೆ, ಛಂದಸ್ಸು, ಸಾಹಿತ್ಯಕ
ಸಂಶೋಧನೆ ಮತ್ತು ಅನುವಾದಗಳು ಮುಖ್ಯವಾದವು. ಆಧುನಿಕ ಕವಿತೆಗಳ ರಚನೆಯಲ್ಲಿಯೂ ಆಸಕ್ತಿ ತೋರಿಸಿರುವ
ಬಸವರಾಜು ಅವರು ಮೂರು ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಬಸವರಾಜು ಅವರು ಕೋಲಾರ ಜಿಲ್ಲೆಯ, ಇಡಗೂರು ಎಂಬ ಚಿಕ್ಕ ಹಳ್ಳಿಯಲ್ಲಿ
ಹುಟ್ಟಿದರು. ಇಡಗೂರು, ಸಿದ್ದಗಂಗೆ ಮತ್ತು ಬೆಂಗಳೂರುಗಳಲ್ಲಿ ಮೊದಲ ಹಂತಗಳ ಶಿಕ್ಷಣವನ್ನು ಪಡೆದ ನಂತರ
ಅವರು ವಿಶೇಷ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದರು. ಅಲ್ಲಿ ಬಿ.ಎ.(ಆನರ್ಸ್) (1946) ಮತ್ತು ಎಂ.ಎ.
(1951) ಪದವಿಗಳನ್ನು ಕನ್ನಡ ವಿಷಯದಲ್ಲಿ ಪಡೆದುಕೊಂಡರು. ಅವರ ‘ಶಿವದಾಸ
ಗೀತಾಂಜಲಿ’ ಎಂಬ ಪುಸ್ತಕಕ್ಕೆ ಮೈಸೂರು ವಿಶ್ವವಿದ್ಯಾಲಯವು
ಡಿ.ಲಿಟ್. ಪದವಿಯನ್ನು ನೀಡಿತು. ಸ್ವಲ್ಪ ಕಾಲ, ದಾವಣಗೆರೆ ಮತ್ತು ಮೈಸೂರಿನ ಯುವರಾಜ ಕಾಲೇಜುಗಳಲ್ಲಿ
ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ, ಬಸವರಾಜು ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ
ಅಧ್ಯಯನ ಸಂಸ್ಥೆಯನ್ನು ಸೇರಿದರು.(1967) 1979 ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು.
ಈ ವಿದ್ವಾಂಸರು, ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ, ಅನೇಕ ಹೊಸ
ಆವಿಷ್ಕಾರಗಳನ್ನು ಮಾಡಿದ್ದಾರೆ; ವಿಶಿಷ್ಟವಾದ ದೃಷ್ಟಿಕೋನಗಳನ್ನು
ಅಳವಡಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಅಭಿಜಾತ ಕೃತಿಗಳು ಮತ್ತು ಜ್ಞಾನದ ಆಕರಗಳನ್ನು, ಪಂಡಿತರೇನೂ
ಅಲ್ಲದ ಜನಸಾಮಾನ್ಯರ ಅಳವಿಗೆ ನಿಲುಕುವಂತೆ ನೀಡಬೇಕೆನ್ನುವುದೇ ಅವರ ಗುರಿ. ಆದ್ದರಿಂದಲೇ ಅವರು ಅನೇಕ
ಮಹಾಕಾವ್ಯಗಳ ಸರಳವಾದ ಗದ್ಯರೂಪಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬರುವ
ಪದ್ಯಗಳನ್ನು, ಬಿಡಿ ಪದಗಳಾಗಿ ಒಡೆದು, ಗದ್ಯಸಮೀಪವಾದ ವಾಕ್ಯರಚನೆಯಲ್ಲಿ ಮರುಜೋಡಣೆ ಮಾಡುವ ಪ್ರಯತ್ನವನ್ನೂ
ಅವರು ಮಾಡಿದ್ದಾರೆ. ಅಗತ್ಯವಿರುವ ಕಡೆಗೆ ಸೂಕ್ತವಾದ ಲೇಖನಚಿಹ್ನೆಗಳನ್ನು ಕೊಟ್ಟಿದ್ದಾರೆ. ಈ ರೀತಿಯ
ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಮುಂಚಿತವಾಗಿಯೂ ಅವರು ಪರಿಶ್ರಮ ವಹಿಸಿ ಗ್ರಂಥಸಂಪಾದನೆ ಮಾಡಿದ್ದರು.
ಓಲೆಗರಿಗಳು ಮತ್ತು ಕಾಗದದ ಹಸ್ತಪ್ರತಿಗಳ ನೆರವಿನಿಂದ ಮೂಲಪಠ್ಯವನ್ನು ಗುರುತಿಸುವ ಕೆಲಸದಲ್ಲಿ ಮಗ್ನರಾಗಿದ್ದರು.
ಬಸವರಾಜು ಅವರು ಸಂಪಾದನೆ ಮಾಡಹೊರಡುವ ಕೃತಿಗಳ ಆಯ್ಕೆಯಲ್ಲಿ ಜಾತ್ಯತೀತವಾದ ಧೋರಣೆಯನ್ನು ಹೊಂದಿದ್ದಾರೆ.
‘ಆದಿಪುರಾಣ’ದಂತಹ
ಜೈನ ಕೃತಿ, ‘ಬುದ್ಧಚರಿತ’ದಂತಹ
ಬೌದ್ಧಕೃತಿ, ‘ತೊರವೆಯ ರಾಮಾಯಣ’,
‘ಶಬ್ದಮಣಿದರ್ಪಣ’
ಯಾವುದೂ ಅವರ ಅನಾದರಕ್ಕೆ ಗುರಿಯಾಗಿಲ್ಲ. ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವರು ಯಾವಾಗಲೂ
ಹಿಂಜರಿದಿಲ್ಲ. ಬಸವರಾಜು ಅವರು ಸಂಪಾದಿಸಿರುವ ಗ್ರಂಥಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ‘ಬಸವೇಶ್ವರರ ವಚನಗಳು’,
1952
- ‘ಅಲ್ಲಮನ ವಚನಚಂದ್ರಿಕೆ’,
1960
- ‘ಶಿವದಾಸ ಗೀತಾಂಜಲಿ’,
1963
- ‘ಬಸವ ವಚನಾಮೃತ’,
1964, 1970, 1989
- ‘ಅಕ್ಕನ ವಚನಗಳು’,
1966
- ‘ಅಲ್ಲಮನ ವಚನಗಳು’,
1969
- ‘ಬಸವಣ್ಣನವರ ವಚನಗಳು’,
1996
- ‘ಬಸವಣ್ಣನವರ ಷಟ್ಸ್ಥಳದ ವಚನಗಳು’,
1990
- ‘ದೇವರ ದಾಸಿಮಯ್ಯನ ವಚನಗಳು’,
- ‘ಸರ್ವಜ್ಞನ ವಚನಗಳು’,
(ಪರಮಾರ್ಥ), 1972
- ‘ಬೆಡಗಿನ ವಚನಗಳು’,
1998
- ‘ಶಿವಗಣಪ್ರಸಾದಿ ಮಹದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ’, 1969
- ‘ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ’, 1998
- ‘ಪಂಪನ ಆದಿಪುರಾಣ’,
1976
- ‘ಪಂಪನ ಸರಳ ಪಂಪಭಾರತ’,
1999
- ‘ಪಂಪನ ಸಮಸ್ತ ಭಾರತ ಕಥಾಮೃತ’
- ‘ಪಂಪನ ಸರಳ ಆದಿಪುರಾಣ’
- ‘ಪಂಪನ ಆದಿಪುರಾಣ ಕಥಾಮೃತ’
- ‘ರನ್ನನ ಸರಳ ಗದಾಯುದ್ಧ’
- ‘ಚಿಕ್ಕದೇವರಾಯ ಸಪ್ತಪದಿ’,
ತಿರುಮಲಾರ್ಯ, 1971
- ‘ತೊರವೆ ರಾಮಾಯಣ ಸಂಗ್ರಹ’,
1951
- ‘ಸರಳ ಸಿದ್ದರಾಮಚರಿತೆ’,
ರಾಘವಾಂಕ, 2000
- ‘ರಾಘವಾಂಕನ ಸರಳ ಹರಿಶ್ಚಂದ್ರ ಕಾವ್ಯ’, 2001
- ‘ಕೇಶಿರಾಜನ ಶಬ್ದಮಣಿದರ್ಪಣ’,
1986
- ಕನ್ನಡ ಛಂದಸ್ಸಂಪುಟ, 1974
(ಇದು, ಛಂದಸ್ಸಿಗೆ ಸಂಬಂಧಿಸಿದ ನಾಲ್ಕು ಪ್ರಾಚೀನ ಕನ್ನಡ ಕೃತಿಗಳನ್ನು
ಒಂದು ಕಡೆ ತಂದಿರುವ ಮಹತ್ವದ ಕೆಲಸ. ನಾಗವರ್ಮನ ಛಂದೋಂಬುಧಿ, ಈಶ್ವರಕವಿಯ ಕವಿಜಿಹ್ವಾಬಂಧನ, ಗುಣಚಂದ್ರನ
ಛಂದಸ್ಸಾರ ಮತ್ತು ವೀರಭದ್ರನ ನಂದಿ ಛಂದೋರ್ಣವಗಳೇ ಆ ಕೃತಿಗಳು.)
ಬಸವರಾಜು ಅವರು ಕೆಲವು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿವರಗಳು ಈ ರೀತಿ ಇವೆ:
- ‘ಬುದ್ಧಚರಿತ’,
ಅಶ್ವಘೋಷ, 2000
- ‘ಸೌಂದರನಂದ’,
ಅಶ್ವಘೋಷ, 2000
- ಭಾಸನ ಭಾರತ ರೂಪಕ, 1958
- ನಾಟಕಾಮೃತ ಬಿಂದುಗಳು, 1958
- ರಾಮಾಯಣ ನಾಟಕ ತ್ರಿವೇಣಿ, 1958, (ಪ್ರತಿಮಾ ನಾಟಕವೂ ಸೇರಿದಂತೆ
ಭಾಸನ ಮೂರು ನಾಟಕಗಳ ಅನುವಾದ.)
- ನಿಜಗುಣ ಶಿವಯೋಗಿಯ ತತ್ವದರ್ಶನ, 1991, (ನಿಜಗುಣ ಶಿವಯೋಗಿಯು
ರಚಿಸಿರುವ ಆರು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳ ಗದ್ಯಾನುವಾದ.)
ಎಪ್ಪತ್ತೈದರ ಮಾಗಿದ ವಯಸ್ಸಿನಲ್ಲಿ ಕವಿತೆಗಳನ್ನು
ರಚಿಸತೊಡಗಿದ ಬಸವರಾಜು ಅವರು, ಇದುವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವು ಠಾಣಾಂತರ,(1994)
ಜಾಲಾರಿ(1995) ಮತ್ತು ಚಾಯಿಬಾಬಾ.(2005)
ಎಲ್. ಬಸವರಾಜು ಅವರು ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಅನೇಕ
ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ಪಡೆದಿದ್ದಾರೆ. ‘ಕರ್ನಾಟಕ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ’,
‘ಪಂಪ ಪ್ರಶಸ್ತಿ’,
‘ರಾಜ್ಯೋತ್ಸವ ಪ್ರಶಸ್ತಿ’,
‘ಬಸವ ಪುರಸ್ಕಾರ’,
‘ನಾಡೋಜ ಪ್ರಶಸ್ತಿ’,
(ಕನ್ನಡ ವಿಶ್ವವಿದ್ಯಾಲಯ) ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಸಮ್ಮಾನ್ ಹಾಗೂ ಭಾಷಾಂತರ ಬಹುಮಾನಗಳು
ಅವುಗಳಲ್ಲಿ ಕೆಲವು. ಅವರು 2009 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು. ಹೀಗೆ, ಬಸವರಾಜು ಅವರು ಸಾಮಾನ್ಯವಾಗಿ ನಿರ್ಲಕ್ಷಿತವಾಗಿರುವ ಕ್ಷೇತ್ರಗಳಲ್ಲಿ
ಅಪರೂಪದ ಹಾಗೂ ಜನಪರವಾದ ಕೆಲಸ ಮಾಡಿದ್ದಾರೆ.
|